ಕನ್ನಡ ಸಂಶೋಧನ ಸಂಸ್ಥೆ : ಹಿಂದಿನ ಮುಂಬಯಿ ಪ್ರಾಂತ್ಯದ ಕನ್ನಡ ಜಿಲ್ಲೆಗಳಾಗಿದ್ದ ಬೆಳಗಾಂವಿ, ಬಿಜಾಪುರ, ಧಾರವಾಡ ಮತ್ತು ಕಾರವಾರ ಪ್ರದೇಶಗಳ ಇತಿಹಾಸ. ಸಂಸ್ಕೃತಿ ಮತ್ತು sಸಾಹಿತ್ಯಗಳ ಅಭ್ಯಾಸ ಮತ್ತು ಸಂಶೋಧನೆಯ ಕಾರ್ಯಗಳಿಗಾಗಿ 1939ರಲ್ಲಿ 

ಧಾರವಾಡದಲ್ಲಿ ಸ್ಥಾಪಿತವಾದ ಸಂಸ್ಥೆ (ಕನ್ನಡ ರಿಸರ್ಚ್ ಇನ್ಸ್ಟಿಟ್ಯೂಟ್).
ಇತಿಹಾಸ : ಕನ್ನಡ ಸಂಶೋಧನ ಸಂಸ್ಥೆ ಸ್ಥಾಪಿತವಾಗುವ ವೇಳೆಗೆ ಆಗಲೇ ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಕರ್ನಾಟಕ ಇತಿಹಾಸ ಸಂಶೋಧಕ ಮಂಡಳಿಗಳು (ಕರ್ನಾಟಕ ಹಿಸ್ಟಾರಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್) ಧಾರವಾಡದಲ್ಲಿದ್ದರೂ ಅವುಗಳ ಕಾರ್ಯಕ್ಷೇತ್ರ 

ಸೀಮಿತವಾಗಿತ್ತು. ಆದ್ದರಿಂದ ಇಂಥ ವ್ಯಾಪಕೋದ್ದೇಶವುಳ್ಳ ಸಂಸ್ಥೆಯೊಂದರ ಆವಶ್ಯಕತೆಯನ್ನು ಮನಗಂಡ ಜನತೆಯ ಆಶೋತ್ತರಗಳನ್ನು ಪುರೈಸುವ ಸಲುವಾಗಿ ಆಗಿನ ಮುಂಬಯಿ ಸರ್ಕಾರ 1938ರಲ್ಲಿ ಕರ್ನಾಟಕ ಕಾಲೇಜಿನ ಪ್ರಾಂಶುಪಾಲ ಎ.ಸಿ. ಫ್ಯಾರನರ 

ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಿತು. ಕನ್ನಡ ಸಂಶೋಧನ ಸಂಸ್ಥೆಯನ್ನು ಸ್ಥಾಪಿಸಬೇಕೆಂದೂ ಅದು ಕನ್ನಡ ಸಾಹಿತ್ಯ ಸಂಸ್ಕೃತಿಗಳ ಅಧ್ಯಯನಕ್ಕೆ ಸಹಾಯಕವಾದ ಮೂಲಸಾಮಗ್ರಿಗಳನ್ನು ಸಂಗ್ರಹಿಸಿ, ಅಭ್ಯಸಿಸುವ ಕಾರ್ಯದಲ್ಲಿ ತೊಡಗಬೇಕೆಂದೂ ಆ ಸಮಿತಿ 

ಸಲಹೆಮಾಡಿತು. ಈ ಸಲಹೆಗೆ ಅನುಗುಣವಾಗಿ ಅಸ್ತಿತ್ವಕ್ಕೆ ಬಂದ ಕನ್ನಡ ಸಂಶೋಧನ ಸಂಸ್ಥೆಗೆ ಆರ್.ಎಸ್. ಪಂಚಮುಖಿಯವರು ನಿರ್ದೇಶಕರಾಗಿ ನೇಮಕವಾದರು. ಮುಂಬಯಿ ಸರ್ಕಾರದಿಂದ ಈ ಸಂಸ್ಥೆಗೆ ಮಂಜೂರಾದ ಸಹಾಯಧನ ವರ್ಷಕ್ಕೆ 12,000 ರೂಪಾಯಿಗಳು; 

ಜೊತೆಗೆ ಮೊದಲನೆಯ ವರ್ಷಕ್ಕೆ 8,000 ರೂ.ಗಳ ಅಧಿಕ ಧನವೂ ದೊರೆಯಿತು. ನಿರ್ದೇಶಕರಿಗೆ ಸೂಕ್ತ ಸಲಹೆಗಳನ್ನು ನೀಡಲು ಒಂದು ಸಲಹಾ ಸಮಿತಿಯನ್ನು ರಚಿಸಲಾಯಿತು. ಎಸ್.ಸಿ. ನಂದೀಮಠ, ಕೆ.ಜಿ, ಕುಂದಣಗಾರ, ಡಿ.ಪಿ. ಕರಮರ್ಕರ್. ದ.ರಾ. ಬೇಂದ್ರೆ, ವಿ.ಕೆ. 

ಗೋಕಾಕ್, ಎಸ್.ಎಸ್. ಮಾಳವಾಡ, ಎ.ಡಿ. ಧೋಪೇಶ್ವರಕರ-ಇವರು ಈ ಮೊಟ್ಟಮೊದಲ ಸಮಿತಿಯಲ್ಲಿ ಸದಸ್ಯರು. ಈ ಸಂಸ್ಥೆ ಮೊದಲ ಎರಡು ವರ್ಷಗಳ ಕಾಲ ಕರ್ನಾಟಕ ಕಾಲೇಜಿನ ಕಟ್ಟಡದಲ್ಲೂ ಅನಂತರ ಸು. 1947ರವರೆಗೆ ಸಾರಸ್ವತ ಪುರದಲ್ಲೂ 1947-1959ರ 

ವರೆಗೆ ಮಾಳಮಡ್ಡಿಯ ಧಾರಾಮಹಲಿನಲ್ಲೂ ಇತ್ತು.
1956ರಲ್ಲಿ ವಿಶಾಲ ಮೈಸೂರು ರಾಜ್ಯವಾದಾಗ ಉತ್ತರ ಕರ್ನಾಟಕದ ಜಿಲ್ಲೆಗಳು ಮೈಸೂರಿಗೆ ಸೇರಿದುವು. ಅದುವರೆವಿಗೂ ಮುಂಬಯಿ ಸರ್ಕಾರದ ಅಧೀನದಲ್ಲಿದ್ದ ಈ ಸಂಸ್ಥೆ ಮೈಸೂರು ಸರ್ಕಾರಕ್ಕೆ ಸೇರಿತು. ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಆರಂಭವಾಗಿ ಆರು 

ವರ್ಷಗಳಾಗಿದ್ದುವು. ಕರ್ನಾಟಕ ವಿಶ್ವವಿದ್ಯಾಲಯವೇ ಈ ಸಂಸ್ಥೆಯನ್ನು ನಡೆಸಿಕೊಂಡು ಹೋಗಲು ಮೈಸೂರು ಸರ್ಕಾರ ಒಪ್ಪಿ ಇದನ್ನು ವಿಶ್ವವಿದ್ಯಾಲಯಕ್ಕೆ ಒಪ್ಪಿಸಿತು. ಆ ವೇಳೆಗಾಗಲೇ ಸಂಸ್ಥೆ ಹಿರಿದಾಗಿ ಬೆಳೆದಿತ್ತು. ಅನೇಕ ಶಾಸನಗಳ ಪಡಿಯಚ್ಚುಗಳು, ಹಸ್ತಪ್ರತಿಗಳು, 

ಶಿಲಾ ಹಾಗೂ ತಾಮ್ರ ಶಾಸನಗಳು, ಪ್ರಾಚ್ಯವಸ್ತು ಶೋಧನದಲ್ಲಿ ಸಂಗ್ರಹಿಸಲಾದ ಇತರ ಅವಶೇಷಗಳು, ನಾಣ್ಯಗಳು, ಕಲ್ಲು ಮತ್ತು ಧಾತುಗಳಲ್ಲಿ ನಿರ್ಮಿತವಾದ ಸುಂದರ ಮೂರ್ತಿಗಳು ಮತ್ತು ವೀರಗಲ್ಲುಗಳು ಸಂಸ್ಥೆಯಲ್ಲಿ ಸಂಗ್ರಹವಾಗಿದ್ದು, ಅವನ್ನು ವ್ಯವಸ್ಥಿತ ರೀತಿಯಲ್ಲಿ 

ಪ್ರದರ್ಶಿಸಲು ಒಂದು ವಸ್ತುಸಂಗ್ರಹಾಲಯ ಅವಶ್ಯವಾಗಿತ್ತು. ಧಾರಾಮಹಲಿನ ಆವರಣದಲ್ಲಿ ಸಣ್ಣದಾದ ಒಂದು ಸಂಗ್ರಹಾಲಯವನ್ನು ರೂಪಿಸಿದ್ದರೂ ಅದು ಸಾಕಾಗಿರಲಿಲ್ಲ. ಈ ಸಂಸ್ಥೆಗಾಗಿ ಸು. 3 ಲಕ್ಷ ರೂ. ಗಳ ವೆಚ್ಚದಲ್ಲಿ ಒಂದು ಪ್ರತ್ಯೇಕ ಭವನವನ್ನು ಕಟ್ಟಿಸಲಾಯಿತು. 

ವಿಶ್ವವಿದ್ಯಾಲಯದ ಪ್ರಮುಖ ಕಟ್ಟಡಕ್ಕೆ ಹೊಂದಿದಂತೆ ನಿರ್ಮಿಸಲಾದ ತನ್ನದೇ ಆದ ಕಲೆ ಮತ್ತು ಪುರಾತತ್ತ್ವಶಾಸ್ತ್ರ ವಸ್ತು ಸಂಗ್ರಹಾಲಯದ (ಮ್ಯೂಸಿಯಂ ಆಫ್ ಆರ್ಟ್ ಅಂಡ್ ಆರ್ಕಿಯಾಲಜಿ) ಕಟ್ಟಡವನು ಈ ಸಂಸ್ಥೆ ಪ್ರವೇಶಿಸಿದ್ದು 1964ರಲ್ಲಿ, ವಿಶ್ವಾವಿದ್ಯಾಲಯ 1962ರ 

ಪ್ರಾಚೀನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನ ವಿಭಾಗವನ್ನು ಆರಂಭಿಸಿತು. ಅದು ಕನ್ನಡ ಸಂಶೋಧನ ಸಂಸ್ಥೆಯೊಡನೆ ಕೂಡಿ ಕೆಲಸ ಮಾಡತೊಡಗಿತು.
ಕನ್ನಡ ಸಂಶೋಧನ ಸಂಸ್ಥೆಯ ಮೊದಲ ನಿರ್ದೇಶಕರಾದ ಆರ್.ಎಸ್. ಪಂಚಮುಖಿ ಯವರು ಈ ಸಂಸ್ಥೆಯಿಂದ ನಿವೃತ್ತರಾದಾಗ (1953) ಈ ಸ್ಥಾನಕ್ಕೆ ಬಂದವರು ಕರ್ನಾಟಕದ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿದ್ದ ಪ್ರೊ. ಎಸ್.ಎಸ್. ಮಾಳವಾಡರು. ಕರ್ನಾಟಕದ ಖ್ಯಾತ 

ಇತಿಹಾಸತಜ್ಞ, ಬಿ.ಎ. ಸಾಲೆತೊರೆ ಅನಂತರ ಈ ಅಧಿಕಾರ ನಿರ್ವಹಿಸಿದರು (1957-62). ಕರ್ನಾಟಕ ವಿಶ್ವವಿದ್ಯಾಲಯ ಈ ಸಂಸ್ಥೆಯ ಆಡಳಿತದ ಜವಾಬ್ದಾರಿಯನ್ನು ವಹಿಸಿಕೊಂಡದ್ದು ಇವರ ಕಾಲದಲ್ಲೇ. ಅನಂತರ ಈ ಹೊಣೆ ಹೊತ್ತವರು ಪಿ. ಬಿ. ದೇಸಾಯಿಯವರು.
ಕನ್ನಡ ಸಂಶೋಧನ ಸಂಸ್ಥೆಯ ಕಾರ್ಯಕ್ಷೇತ್ರ ವರ್ಷೇ ವರ್ಷೇ ವಿಸ್ತರಿಸುತ್ತಿದೆ. 1970-71ರಲ್ಲಿ ಈ ಸಂಸ್ಥೆಗಾಗಿ ವಿಶ್ವವಿದ್ಯಾಲಯ ಮಾಡಿದ ವೆಚ್ಚ 1,50,000 ರೂ. ವಿಶ್ವವಿದ್ಯಾಲಯದ ಅಂಗವಾಗಿ ಈ ಸಂಸ್ಥೆ ಕಾರ್ಯನಿರ್ವಹಣೆ ಮುಂದುವರಿಸಿದಾಗ ಇದರ ಕಾರ್ಯಕ್ಷೇತ್ರದಲ್ಲೂ 

ಬದಲಾವಣೆಗಳಾಗಿವೆ. ಆರಂಭದಲ್ಲಿ ಕರ್ನಾಟಕದ ಇತಿಹಾಸವಲ್ಲದೆ ಸಾಹಿತ್ಯ, ಸಂಸ್ಕೃತಿ ಮತ್ತು ಜನಪದ ಸಾಹಿತ್ಯಗಳಲ್ಲೂ ಈ ಸಂಸ್ಥೆ ಆಸಕ್ತಿ ವಹಿಸಿತ್ತು. ಇತಿಹಾಸ ಕನ್ನಡ ಮತ್ತು ಸಮಾಜವಿಜ್ಞಾನಗಳ ಅಧ್ಯಯನ ಅಧ್ಯಾಪನಗಳಿಗೆ ಇಲ್ಲಿ ಅನುಕೂಲ ಕಲ್ಪಿಸಲಾಗಿತ್ತು. ಈ 

ಸಂಸ್ಥೆ ವಿಶ್ವವಿದ್ಯಾಲಯಕ್ಕೆ ಸೇರಿದ ಮೇಲೆ ಸಮಾಜವಿಜ್ಞಾನ ಹಾಗೂ ಕನ್ನಡ ವಿಭಾಗಗಳು ಪ್ರತ್ಯೇಕವಾಗಿ ಕಾರ್ಯದಲ್ಲಿ ತೊಡಗಿದ್ದರಿಂದ ಕರ್ನಾಟಕದ ಮತ್ತು ಭಾರತದ ಇತಿಹಾಸ, ಸಂಸ್ಕೃತಿ, ಕಲೆ ಮತ್ತು ಪ್ರಾಕ್ತನವಿಜ್ಞಾನಗಳಿಗೆ ಸಂಬಂಧಿಸಿದಂತೆ ಇದರ ಕ್ಷೇತ್ರ ಈಗ 

ಮಿತಗೊಂಡಿದೆ.
ಸಾಧನೆಗಳು : ಈ ಸಂಸ್ಥೆ ನಾಡಿಗೆ ಮೂವತ್ತು ವರ್ಷಗಳಲ್ಲಿ ಬಹುಮುಖ ಸೇವೆಸಲ್ಲಿಸಿದೆ. ಕರ್ನಾಟಕದ ಈ ಭಾಗದಲ್ಲಿನ ಸಾವಿರಾರು ಶಾಸನಗಳ ಪ್ರತಿಗಳನ್ನು ಪಡೆದು, ಅವನ್ನು ಪ್ರಕಟಿಸುವುದು ಇದರ ಹೊಣೆಗಳಲ್ಲಿ ಒಂದು. 1500ಕ್ಕೂ ಹೆಚ್ಚು ಶಾಸನಗಳ ಪ್ರತಿಗಳು 

ಸಂಸ್ಥೆಯಲ್ಲುಂಟು. ಇದನ್ನು ಸಂಸ್ಥೆಯ ವಾರ್ಷಿಕ ವರದಿಗಳಲ್ಲಿ ಸೂಕ್ಷ್ಮವಾಗಿ ಅವಲೋಕಿಸ ಲಾಗಿದೆಯಲ್ಲದೆ ಶಾಸನಗಳ ಪಾಠ, ಸಾರಾಂಶ, ಮಹತ್ತ್ವದ ವಿವೇಚನೆ ಇವನ್ನು ಕರ್ನಾಟಿಕ ಇನ್ಸ್ಕ್ರಿಪ್ಷನ್ಸ್‌ ಎಂಬ ಸಂಪುಟಗಳಲ್ಲಿ ಪ್ರಕಟಿಸುತ್ತ ಬರಲಾಗಿದೆ. ಇದುವರೆಗೆ ಹೊರಬಿದ್ದಿರುವ 

ಇಂಥ ಸಂಪುಟಗಳು ಐದು. ಮೊದಲ 3ಕ್ಕೆ ಪಂಚಮುಖಿಯವರೂ 4ನೆಯದಕ್ಕೆ ಎಂ.ಎಂ. ಅಣ್ಣಿಗೇರಿಯವರೂ 5 ಮತ್ತು 6ಕ್ಕೆ ಬಿ.ಆರ್. ಗೋಪಾಲರೂ ಸಂಪಾದಕರು. ಉತ್ತರ ಕರ್ನಾಟಕಕ್ಕೆ ಸೇರಿದ ಗುಲ್ಬರ್ಗ, ಬಿದರೆ, ರಾಯಚೂರು ಜಿಲ್ಲೆಗಳಲ್ಲಿ ಅನೇಕ ಶಾಸನಗಳಿವೆ. ಸಂಸ್ಥೆ 

ಅವನ್ನು ಪ್ರತಿಮಾಡಿ ಪ್ರಕಟಿಸುವ ಕಾರ್ಯದಲ್ಲಿ ತೊಡಗಿದೆ. ಒಟ್ಟು 6 ಸಂಪುಟಗಳನ್ನು ಪ್ರಕಟಿಸಿದೆ.
ಸಂಸ್ಥೆ ಕಂಡುಹಿಡಿದ ಶಾಸನಗಳಲ್ಲಿ ಅತಿ ಪ್ರಾಚೀನವಾದದ್ದು ವಡಗಾಂವ-ಮಾಧವಪುರದಲ್ಲಿ ದೊರೆತ ಷಟ್ಕೋಣಾಕಾರದ ಸ್ತಂಭಶಿಲಾಲಿಪಿ. ಇದರದು ಪ್ರಾಕೃತ ಬಾಷೆ, ಬ್ರಾಹ್ಮೀಲಿಪಿ. ಶಾಸನದ ಕಾಲ ಪ್ರ.ಶ.ಪು. 1ನೆಯ ಶತಮಾನ. ಬಾದಾಮಿಯಲ್ಲಿ ಬಂಡೆಗಲ್ಲಿನ ಮೇಲೆ 

ಕೊರೆಯಲಾದ ಶಕವರ್ಷ 456ರ (ಪ್ರ.ಶ. 543) ಮೊದಲನೆಯ ಪುಲಿಕೇಶಿಯ ಶಾಸನ ಇನ್ನೊಂದು ಮಹತ್ತ್ವದ ಶೋಧ. ಇತ್ತೀಚೆಗೆ ಗುಲ್ಬರ್ಗ ಜಿಲ್ಲೆಯ ಸನ್ನತಿ ಎಂಬ ಗ್ರಾಮದಲ್ಲಿ ಕೈಕೊಂಡ ಅನ್ವೇಷಣೆಯಲ್ಲಿ 2ನೆಯ ಶತಮಾನಕ್ಕೆ ಸೇರಿದ ಬೌದ್ಧ ಸಂಸ್ಕೃತಿಯ ಅವಶೇಷಗಳೂ 

ಕೆಲವು ಬ್ರಾಹ್ಮೀಲಿಪಿಯ ಶಾಸನಗಳು ದೊರೆತಿವೆ. ಚಾಳುಕ್ಯ ಮಂಗಳೇಶನ ಮತ್ತು ಗಂಗವಂಶದ ಮಾರಸಿಂಗನ ತಾಮ್ರಪಟಗಳು ಐತಿಹಾಸಿಕ ದೃಷ್ಟಿಯಲ್ಲಿ ಬಹಳ ಮುಖ್ಯವಾದುವು. ಮಂಗಳೇಶನ ಶಾಸನದ ರಾಜಮುದ್ರೆಯಲ್ಲಿ ತನ್ನ ಮರಿಗೆ ಹಾಲು ಕುಡಿಸುತ್ತಿರುವ ಹೆಣ್ಣು 

ಹುಲಿಯ ಆಕೃತಿ ಇದೆ. ಇದುವರೆಗೆ ದೊರೆತ ಎಲ್ಲ ತಾಮ್ರಶಾಸನಗಳಲ್ಲಿ ಇದು ಅಪುರ್ವವಾದದ್ದು. 6-7ನೆಯ ಶತಮಾನಗಳಲ್ಲಿ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಆಳಿದ ಸಾಮಂತ ಅರಸರಾದ ಮೌರ್ಯ ಮತ್ತು ಭೋಜನ ಮನೆತನಗಳ ಅರಸರ ತಾಮ್ರಪಟಗಳನ್ನು ಸಂಗ್ರಹಿಸಿ 

ಪ್ರಕಟಿಸಲಾಗಿದೆ.
ಪುರಾತತ್ತ್ವ ಶೋಧನೆಯಲ್ಲಿ ಈ ಸಂಸ್ಥೆ ಸಾಕಷ್ಟು ಕೆಲಸಮಾಡಿದೆ. ಪ್ರಾಚೀನ ಶಿಲಾಯುಗ, ನವಶಿಲಾಯುಗ ಮತ್ತು ಬೃಹತ್ ಶಿಲಾಯುಗ (ಧಾತುಯುಗ)ಗಳಿಗೆ ಸೇರಿದ ಅನೇಕ, ನಿವೇಶನಗಳನ್ನು ಗುರುತಿಸಲಾಗಿದೆ. ಮಲಪ್ರಭಾ, ಘಟಪ್ರಬಾ ಮತ್ತು ಕೃಷ್ಣಾನದಿಗಳ ತೀರಗಳಲ್ಲಿ 

ದೊರೆತ ಅನೇಕ ಶಿಲಾಯುಧಗಳನ್ನು ಸಂಗ್ರಹಿಸಲಾಗಿದೆ. ಕೆಲವು ನಿವೇಶನಗಳಲ್ಲಿ ಉತ್ಖನನ ಕಾರ್ಯ ನಡೆದಿದೆ.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿನ ಮಹಾಲಕ್ಷ್ಮೀ ದೇವಾಲಯದ ಸಮೀಪದ ಬ್ರಹ್ಮಪುರಿ ಒಂದು ಪ್ರಾಚೀನ ನಿವೇಶನ. ಈ ಸ್ಥಳದಲ್ಲಿ ಮೊದಲ ಬಾರಿ ಕನ್ನಡ ಸಂಶೋಧನೆ ಸಂಸ್ಥೆ ಅನ್ವೇಷಣೆ ನಡೆಸಿ ಅನೇಕ ಮಹತ್ತ್ವದ ಐತಿಹಾಸಿಕ ವಿಷಯಗಳನ್ನು ಬೆಳಕಿಗೆ ತಂದಿತು. 

ಪುಣೆಯಲ್ಲಿ ಡೆಕ್ಕನ್ ಕಾಲೇಜಿನಲ್ಲಿರುವ ಸಂಶೋಧನ ಸಂಸ್ಥೆಯೊಡನೆ ಕೂಡಿಕೊಂಡು, ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟ ಗ್ರಾಮದಲ್ಲಿ ಉತ್ಖನನ ಕಾರ್ಯವನ್ನು ಕೈಗೊಳ್ಳಲಾಯಿತು. ಹಾಗೆಯೇ ಧಾರವಾಡ ಜಿಲ್ಲೆಯ ಹಳ್ಳೂರಿನಲ್ಲೂ ಒಂದು ನಿವೇಶನವನ್ನು ವೈe್ಞÁನಿಕ 

ರೀತಿಯಲ್ಲಿ ಅಗೆಯಲಾಗಿದೆ. ಈ ಅಗೆತಗಳಿಂದ ಕರ್ನಾಟಕದ ನವಶಿಲಾಸಂಸ್ಕೃತಿಗೆ ಸಂಬಂಧಿಸಿದ ಅನೇಕ ಹೊಸ ವಿಷಯಗಳು ಗೋಚರವಾಗಿವೆ.
ಕರ್ನಾಟಕದ ಕಲೆ ವಾಸ್ತುಶಿಲ್ಪಗಳ ಅಭ್ಯಾಸಕ್ಕಾಗಿ ಅನೇಕ ವಿಗ್ರಹಗಳನ್ನೂ ವೀರಗಲ್ಲು, ಮಕರತೋರಣ ಮುಂತಾದವನ್ನೂ ಸಂಸ್ಥೆ ತನ್ನ ಸಂಗ್ರಹಾಲಯದಲ್ಲಿ ಪ್ರದರ್ಶಿಸಿದೆ. ಜೈನರ ತೀರ್ಥಂಕರರ ವಿಗ್ರಹಗಳನ್ನು ಇಲ್ಲಿ ಕಾಣಬಹುದು. ಇವುಗಳಲ್ಲೆಲ್ಲ ಬಹಳ ಮುಖ್ಯವಾದುದು 

ಪಟ್ಟದಕಲ್ಲಿನಲ್ಲಿ ದೊರೆತ ನಟರಾಜನ ವಿಗ್ರಹ. ಕೆಂಪು ಶಿಲೆಯ ಈ ವಿಗ್ರಹ ಸಾಮಾನ್ಯವಾಗಿ ಕಾಣಬರುವ ಇಂಥ ಮೂರ್ತಿಗಳಿಗಿಂತ ಭಿನ್ನವಾದದ್ದು. ಅನೇಕ ಶಿಲಾಶಾಸನಗಳು ಇಲ್ಲಿವೆ. ಬಸವೇಶ್ವರರನ್ನು ಕುರಿತ ಖಚಿತವಾದ ಶಾಸನಾಧಾರವೆನಿಸಿದ ಅರ್ಜುನವಾಡನ 

ಶಿಲಾಸಾಸನ ಈಗ ಈ ಸಂಸ್ಥೆಯಲ್ಲುಂಟು. ಇಲ್ಲಿಯ ವಸ್ತುಸಂಗ್ರಹಾಲಯ ವನ್ನು ಇತ್ತೀಚೆಗೆ ಆಧುನಿಕ ರೀತಿಯಲ್ಲಿ ಪುನರ್ ರೂಪಿಸಲಾಗಿದೆ. ಹರಪ್ಪ-ಮೊಹೆಂಜೊದಾರೊಗಳಲ್ಲಿ ದೊರೆತ ಅವಶೇಷಗಳಲ್ಲಿ ಕೆಲವನ್ನೂ ಕೆಲವು ಪ್ರತಿಕೃತಿಗಳನ್ನು (ಪ್ಲಾಸ್ಟರ್ಕ್ಯಾಸ್ಟ್‌) ಕರ್ನಾಟಕದ 

ಪ್ರಾಗೈತಿಹಾಸಿಕ ಕಾಲದ ಶಿಲಾಯುಧಗಳು, ಮಡಕೆಗಳು, ಕಬ್ಬಿಣದ ಆಯುಧಗಳು ಮುಂತಾದುವನ್ನೂ ಇಲ್ಲಿ ಕಾಣಬಹುದು. ಕನ್ನಡಲಿಪಿಯ ಬೆಳೆವಣಿಗೆಯನ್ನು ತೋರಿಸುವ ಮೂಲಶಾಸನ ಪ್ರತಿಗಳನ್ನೂ ಚಿತ್ರಗಳನ್ನೂ ಅಲ್ಲದೆ ಕರ್ನಾಟಕದ ಕಲೆಯನ್ನು ರೂಪಿಸುವ ಚಿತ್ರಗಳನ್ನು 

ಇಲ್ಲಿ ಪ್ರದರ್ಶಿಸಲಾಗಿದೆ. ಇಲ್ಲಿನ ವಸ್ತುಸಂಗ್ರಹಾಲಯ ಉತ್ತಮ ಗುಣ ಮೌಲ್ಯ ಹೊಂದಿದೆ ಎಂಬ ಕೀರ್ತಿಗೆ ಪಾತ್ರವಾಗಿದೆ.
ಸಂಸ್ಥೆಯಲ್ಲಿ ಅನೇಕ ವಿದ್ಯಾರ್ಥಿಗಳು ಸಂಶೋಧನ ಕಾರ್ಯದಲ್ಲಿ ತೊಡಗಿದ್ದಾರೆ. ಅವರಿಗೂ ಇತರರಿಗೂ ಸಹಾಯವಾಗುವಂತೆ ಪ್ರತಿವರ್ಷ ಪಂಡಿತರಿಂದ ವಿವಿಧ ವಿಷಯಗಳ ಮೇಲೆ ಪಾಂಡಿತ್ಯಪುರ್ಣ ಸಂಶೋಧನ ಉಪನ್ಯಾಸಗಳನ್ನೇರ್ಪಡಿಸಿ ಅನಂತರ ಅವನ್ನು 

ಪ್ರಕಟಿಸುವುದು ಈ ಸಂಸ್ಥೆಯ ಕಾರ್ಯಗಳಲ್ಲಿ ಒಂದು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ತಲಾ 8 ಉಪನ್ಯಾಸಗಳು ಪ್ರಕಟವಾಗಿವೆ.
ಕರ್ನಾಟಕದಲ್ಲಿನ ಅನೇಕ ಕಡೆ ಮಠಗಳಲ್ಲೂ ವಿದ್ವಾಂಸರ ಪುರಾತನ ಮನೆತನಗಳಲ್ಲೂ ಓಲೆಗರಿಯಲ್ಲಿ ಬರೆದ ಗ್ರಂಥಗಳು ಸಿಗುತ್ತವೆ. ಇವುಗಳಲ್ಲಿ ಪ್ರಾಚೀನ ಸಾಹಿತ್ಯ ಗ್ರಂಥಗಳನೇಕವಿವೆ. ಸರಿಯಾದ ರಕ್ಷಣೆಯಿಲ್ಲದೆ ನಾಶವಾಗುತ್ತಿರುವ ಈ ಗ್ರಂಥಗಳನ್ನು ಸಂಗ್ರಹಿಸಿ 

ಸುಸ್ಥಿತಿಯಲ್ಲಿ ಕಾಪಾಡುವ ಕಾರ್ಯವನ್ನು ಸಂಸ್ಥೆ ಕೈಗೊಂಡಿತು, ಈಗ ಸಂಸ್ಥೆಯಲ್ಲಿ ಇಂಥ ಸು. 2,000 ಗ್ರಂಥಗಳಿವೆ. ಇವನ್ನು ಪರೀಕ್ಷಿಸಿ, ವ್ಯಾಕರಣ, ನಿಘಂಟು, ಪುರಾಣ ಮತ್ತು ಕಾವ್ಯ, ಜೀವನ ವೃತ್ತಾಂತ, ವೇದಾಂತ, ಧರ್ಮಶಾಸ್ತ್ರ, ತತ್ತ್ವe್ಞÁನ, 

ಲೌಕಿಕಶಾಸ್ತ್ರಗಳು, ಐತಿಹಾಸಿಕ-ಹೀಗೆ ವಿಷಯಾನುಗುಣವಾಗಿ ವಿಂಗಡಿಸಿ ಈ ಗ್ರಂಥಗಳ ವಿವರಣಾತ್ಮಕ ಗ್ರಂಥಸೂಚಿಗಳನ್ನು (ಡಿಸ್ಕ್ರಿಪ್ಟಿವ್ ಕ್ಯಾಟಲಾಗ್ಸ್‌) ಪ್ರಕಟಿಸಲಾಗುತ್ತಿದೆ. ಇಂಥ ಒಂಬತ್ತು ಸಂಪುಟಗಳು ಈಗಾಗಲೇ ಪ್ರಕಟವಾಗಿವೆ. ಅವುಗಳಲ್ಲಿ ಐದು ಗ್ರಂಥಗಳನ್ನು 

ಸಂಪಾದಿಸಿ ಪ್ರಕಟಿಸಲಾಗಿದೆ. ಕವಿಜಿಹ್ವಾಬಂಧನ, ಮದನತಿಲಕ, ಐರಾವತ, ವಿರೂಪಾಕ್ಷ ವಸಂತೋತ್ಸವ ಚಂಪು ಮತ್ತು ಸಮಯಪರೀಕ್ಷೆ-ಇವೇ ಆ ಗ್ರಂಥಗಳು. ಅದಲ್ಲದೆ ಕಲೆ, ಸಂಸ್ಕೃತಿಗಳಿಗೆ ಸಂಬಂಧಿಸಿದ ಸಂಶೋಧನಾತ್ಮಕವಾದ 11 ಪ್ರಬಂಧಗಳನ್ನೂ 

ಪ್ರಕಟಿಸಲಾಗಿದೆ.
ಕರ್ನಾಟಕದ ಇತಿಹಾಸವನ್ನು ಆಧಾರಭೂತವಾಗಿ ಸವಿಸ್ತಾರವಾಗಿ 12 ಸಂಪುಟಗಳಲ್ಲಿ ರಚಿಸಬೇಕೆಂಬುದು ಸಂಸ್ಥೆಯ ಇತ್ತೀಚಿನ ಯೋಜನೆ. ಈ ದಿಶೆಯಲ್ಲಿ ಮೊದಲ ಹೆಜ್ಜೆಯಾಗಿ, ಸಾಮಾನ್ಯ ಓದುಗರಿಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ 

ಸಮಗ್ರ ಇತಿಹಾಸ ಗ್ರಂಥವೊಂದನ್ನು ಹೊರತರಲಾಗಿದೆ. ಪಿ.ಬಿ. ದೇಸಾಯಿ ನಿರ್ದೇಶನದಲ್ಲಿ ಬಿ.ಆರ್. ಗೋಪಾಲ್ ಮತ್ತು ಶ್ರೀನಿವಾಸ ರಿತ್ತಿಯವರು ಕೂಡಿ ಈ ಗ್ರಂಥವನ್ನು ಬರೆದಿದ್ದಾರೆ. 
ಕರ್ನಾಟಕದ ಪ್ರತಿ ಗ್ರಾಮದಲ್ಲೂ ಸಾಮಾನ್ಯವಾಗಿ ಒಂದೆರಡಾದರೂ ಶಿಲಾ ಶಾಸನಗಳು ಸಿಗುತ್ತವೆ. ಕನ್ನಡ ನಾಡಿನ ಇತಿಹಾಸ ಸಂಸ್ಕೃತಿಗಳನ್ನು ಅರಿಯಲು ಇವು ಮೂಲಾಧಾರ. ಸಂಶೋಧನೆಯಲ್ಲಿ ತೊಡಗಿರುವವರು ಮೂಲಶಾಸನಗಳನ್ನು ತಾವೇ 

ಓದಿಕೊಳ್ಳಬಹುದೆಂಬ ಆಶಯದಿಂದ 1965ರಲ್ಲಿ ಲಿಪಿಶಾಸ್ತ್ರಕ್ಕೆ ಸಂಬಂಧಿಸಿದಂತೆ ಒಂದು ಶಿಕ್ಷಣ ತರಗತಿಯನ್ನು (ಡಿಪ್ಲೊಮ ಕೋರ್ಸ್ ಇನ್ ಎಪಿಗ್ರಫಿ) ತೆರೆಯಲಾಯಿತು. ಅನೇಕ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಭಾರತದ ಬೇರೆ ಯಾವ 

ವಿಶ್ವವಿದ್ಯಾಲಯದಲ್ಲೂ ಈ ಬಗೆಯ ಶಿಕ್ಷಣ ನೀಡುತ್ತಿಲ್ಲ.
ಇದಕ್ಕೆ ಒಂದು ಗ್ರಂಥಾಲಯ ಆವಶ್ಯಕವೆಂಬುದನ್ನು ಮನಗಂಡು ಸಂಸ್ಥೆ ಆರಂಭವಾದಾಗಲೇ ಇದನ್ನು ಆರಂಭಿಸಲಾಯಿತು. ಇಂದು ಗ್ರಂಥಾಲಯದಲ್ಲಿ ಇತಿಹಾಸ, ಕಲೆ, ಸಂಸ್ಕೃತಿ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಸು. 10,000ಕ್ಕೂ ಹೆಚ್ಚು ಗ್ರಂಥಗಳಿವೆ.	

(ಜೆ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ